ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಯಕ್ಷಗಾನ ಕಲಾರಂಗ ನಲುವತ್ತರ ಅಭಿಮಾನದ ಪ್ರಶಸ್ತಿ ಪುರಸ್ಕೃತರು

ಲೇಖಕರು : ನಾರಾಯಣ ಎಂ. ಹೆಗಡೆ
ಶನಿವಾರ, ನವ೦ಬರ್ 8 , 2014
ಸದಭಿರುಚಿಯ ಯಕ್ಷಗಾನ ಪ್ರದರ್ಶನಗಳನ್ನು ಆಯೋಜಿಸುವ ಉದ್ದೇಶದ ಸಮಾನಾಸಕ್ತರ ಒಕ್ಕೂಟವಾಗಿ 1975ರಲ್ಲಿ ಆರಂಭಗೊಂಡು ನಾಲ್ಕು ದಶಮಾನಗಳನ್ನು ಹಾದು ಬಂದಿರುವ ಯಕ್ಷಗಾನ ಕಲಾರಂಗ ಈಗ ತನ್ನ ಕಾರ್ಯಕ್ಷೇತ್ರವನ್ನು ದಶದಿಕ್ಕುಗಳಲ್ಲಿ ವಿಸ್ತರಿಸಿಕೊಂಡಿದೆ. ಯಕ್ಷಗಾನ ಪ್ರದರ್ಶನಗಳ ಆಯೋಜನೆಯಷ್ಟೇ ಅಲ್ಲದೆ, ಯಕ್ಷಗಾನ ಕಲೆ - ಕಲಾವಿದರ ಕ್ಷೇಮ ಚಿಂತನೆ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶೈಕ್ಷಣಿಕ ಅಭ್ಯುದಯಕ್ಕೆ ವಿದ್ಯಾಪೋಷಕ್‌ - ಹೀಗೆ ವಿಶಾಲ ಕಾರ್ಯವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದೆ.

ನಲುವತ್ತು ವರ್ಷಗಳನ್ನು ಪೂರೈಸಿದ ಸಂಭ್ರಮದ ಸಮಾರಂಭ ಜತೆಗೆ ಪ್ರತಿವರ್ಷದಂತೆ ಕಲಾಸಂಸ್ಥೆಗೆ, ಕಲಾವಿದರಿಗೆ ನೀಡುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮತ್ತು ಕಾಲಮಿತಿಯ ಎರಡು ಯಕ್ಷಗಾನ ಆಖ್ಯಾನಗಳ ಪ್ರದರ್ಶನ ನವೆಂಬರ್‌ 9ರಂದು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8.30ರವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.



ವಿವರ - 1...   ವಿವರ - 2...


ಯಕ್ಷಗಾನ ಕಲಾರಂಗ ಪ್ರಶಸ್ತಿ ವಿಜೇತ ಕಲಾವಿದರ ಸಂಕ್ಷಿಪ್ತ ಪರಿಚಯ.

ಡಾ| ಬಿ.ಬಿ. ಶೆಟ್ಟಿ ಪ್ರಶಸ್ತಿ : ಹಳ್ಳಾಡಿ ಜಯರಾಮ ಶೆಟ್ಟಿ



ಬಡಗುತಿಟ್ಟಿನ ಪ್ರಸಿದ್ಧ ಹಾಸ್ಯ ಕಲಾವಿದ. ಚುರುಕಿನ ಮಾತುಗಾರಿಕೆ, ವೇಷ ಭೂಷಣ, ಕುಣಿತಗಳಿಂದ ತಮ್ಮತನ ಸ್ಥಾಪಿಸಿದರು. ಕುಂದಾಪುರ ತಾಲೂಕಿನ ಹಳ್ಳಾಡಿಯಲ್ಲಿ ಜನನ. 12ರ ಹರೆಯದಲ್ಲೆ ಯಕ್ಷಗಾನ ರಂಗ ಪ್ರವೇಶಿಸಿದ ಇವರಿಗೆ ಹಳ್ಳಾಡಿ ಮಂಜಯ್ಯ ಶೆಟ್ಟರು ಯಕ್ಷಗಾನದ ಗುರುಗಳು. ರಂಗದಲ್ಲೆ ಕಲಿತು ಬೆಳೆದವರು, ಪ್ರಸಿದ್ಧ ಭಾಗವತ ನಾರ್ಣಪ್ಪಉಪ್ಪೂರರಿಂದ ತಿದ್ದಲ್ಪಟ್ಟವರು.

ಕಮಲಶಿಲೆ, ಮಂದಾರ್ತಿ, ಅಮೃತೇಶ್ವರಿ, ಮೂಲ್ಕಿ, ಪೆರ್ಡೂರು, ಕುಂಬಳೆ ಮೇಳಗಳಲ್ಲಿ ಎರಡು ದಶಕ ತಿರುಗಾಟ ಮಾಡಿ ಸುಮಾರು ಎರಡೂವರೆ ದಶಕ ಸಾಲಿಗ್ರಾಮ ಮೇಳದಲ್ಲಿ ಪ್ರಧಾನ ಹಾಸ್ಯಕಲಾವಿದರಾಗಿ ಪಾತ್ರ ನಿರ್ವಹಿಸಿದ್ದಾರೆ.




ಪ್ರೊ| ಬಿ. ವಿ. ಆಚಾರ್ಯ ಪ್ರಶಸ್ತಿ : ಕೃಷ್ಣ ಸುವರ್ಣ



ಬಡಗುತಿಟ್ಟಿನ ವೇಷ ಭೂಷಣ ತಯಾರಿಕೆ ಮತ್ತು ಬಣ್ಣಗಾರಿಕೆಯಲ್ಲಿ ಪರಿಣತ ರಾದ ಕೃಷ್ಣ ಸುವರ್ಣರು ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ವಾರಂಬಳ್ಳಿ ಯವರು. ಯಕ್ಷಗಾನ ವಲಯದಲ್ಲಿ "ಕಿಟ್ಟಣ್ಣ'ನೆಂದೇ ಎಲ್ಲರ ಪ್ರೀತಿ, ವಿಶ್ವಾಸಕ್ಕೆ ಪಾತ್ರರು. 70ರ ಇಳಿ ಹರೆಯದಲ್ಲೂ ಯಕ್ಷಗಾನ ಕಾಯಕದಲ್ಲಿ ಪ್ರವೃತ್ತರು. ಸೋದರಮಾವ ಸಂಕ ಮರಕಾಲ ಇವರಿಗೆ ಯಕ್ಷಗಾನ ಗುರು.

ಆರಂಭದ ಕೆಲವು ವರ್ಷಗಳಲ್ಲಿ ಮಾರಣಕಟ್ಟೆ, ಮಂದಾರ್ತಿ ಮೇಳಗಳಲ್ಲಿ ಪೀಠಿಕೆ ಸ್ತ್ರೀವೇಷ, ಒಡ್ಡೋಲಗ ವೇಷಗಳನ್ನು ಮಾಡುತ್ತ ತಿರುಗಾಟ ನಡೆಸಿದವರು. ಅನಂತರ ಯಕ್ಷಗಾನ ಪ್ರಸಾಧನ ಮತ್ತು ಬಣ್ಣಗಾರಿಕೆಯನ್ನು ವೃತ್ತಿಯಾಗಿ ಸ್ವೀಕರಿಸಿ ನಿರಂತರ 57 ವರ್ಷಗಳಿಂದ ಈ ಕಾಯಕ ನಿರತರು. ಚಂಡಿಕಾ ದುರ್ಗಾಪರಮೇಶ್ವರೀ ಯಕ್ಷಗಾನ ಕಲಾಸಂಘ, ಬ್ರಹ್ಮಲಿಂಗೇಶ್ವರ ಯಕ್ಷಗಾನ ಕಲಾಮಂಡಳಿ ಮುಂದೆ ಸುದೀರ್ಘ‌ ಅವಧಿಗೆ ಅಜಪುರ ಯಕ್ಷಗಾನ ಸಂಘದ ಪ್ರಸಾಧನಕಾರರು.




ನಿಟ್ಟೂರು ಸುಂದರ ಶೆಟ್ಟಿ - ಮಹೇಶ್‌ ಡಿ. ಶೆಟ್ಟಿ ಪ್ರಶಸ್ತಿ : ಮರ್ಕಂಜ ಐತಪ್ಪ ಗೌಡ



ತೆಂಕುತಿಟ್ಟಿನ ಪರಂಪರೆಯ ಬಣ್ಣದ ವೇಷಗಳ ರಂಗ ನಿರ್ವಹಣೆ ಯಲ್ಲಿ ಯಶಸ್ಸು ಕಂಡ ಪ್ರಸಿದ್ಧ ವೇಷಧಾರಿ.55ರ ಹರೆಯದ ಐತಪ್ಪ ಗೌಡರು ದ.ಕ. ಜಿಲ್ಲೆಯ ಉಬರಡ್ಕ ದವರು. ಹವ್ಯಾಸಿ ಭಾಗವತರಾಗಿದ್ದ ತನ್ನ ಮಾವ ಕೃಷ್ಣಪ್ಪ ಗೌಡರ ಪ್ರೇರಣೆಯು ಐತಪ್ಪ ಗೌಡರು ಕಲಾವಿದ ರಾಗಿ ರೂಪುಗೊಳ್ಳುವಲ್ಲಿ ಪ್ರಭಾವ ಬೀರಿತು. ಮಿತ್ತಡ್ಕ ರಾಮಕೃಷ್ಣ ಕಮ್ತಿಯವರು ಇವರಿಗೆ ಯಕ್ಷಗಾನದ ಗುರು. ಆರಂಭದಲ್ಲಿ ಸ್ತ್ರೀವೇಷ, ಪುಂಡುವೇಷ, ಕಿರೀಟ ವೇಷ ಗಳನ್ನು ಮಾಡಿ ಆಮೇಲೆ ಬಣ್ಣದ ವೇಷದಲ್ಲಿ ಮೆರೆದರು.

ಧರ್ಮಸ್ಥಳ, ಬಳಂಬೆಟ್ಟು, ವೇಣೂರು, ದೇಲಂಪುರಿ, ಮಡಿಕೇರಿ, ಚೌಡೇಶ್ವರಿ ಮೇಳಗಳಲ್ಲಿ ತಿರುಗಾಟ ಮಾಡಿ ಮೂರು ದಶಕಗಳಿಂದ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಹವ್ಯಾಸಿ ಕಲಾವಿದರಿಗೆ ಯಕ್ಷಗಾನ ತರಬೇತಿಯನ್ನು ನೀಡುತ್ತಾರೆ.




ಕೆ. ವಿಶ್ವಜ್ಞ ಶೆಟ್ಟಿ ಪ್ರಶಸ್ತಿ: ಮಂಗಲ್ಪಾಡಿ ಮಹಾಬಲ ಶೆಟ್ಟಿ



ತೆಂಕುತಿಟ್ಟಿನ ಹಿರಿಯ ವೇಷಧಾರಿ. ಕಾಸರಗೋಡಿನ ಮಂಗಲ್ಪಾಡಿ ಗ್ರಾಮದವರಾದ ಇವರಿಗೆ ಉಪ್ಪಳ ಕೃಷ್ಣ ಮಾಸ್ತರ್‌ ಯಕ್ಷ ಗುರುಗಳು. ಭಗವತೀ, ಮಲ್ಲ, ಮಧೂರು, ಬೆಳ್ಮಣ್ಣು, ಕಟೀಲು, ಸುಂಕದಕಟ್ಟೆ ಮೇಳಗಳಲ್ಲಿ ಮೂರುವರೆ ದಶಕಗಳ ಕಲಾಸೇವೆ ನಡೆಸಿದ್ದಾರೆ. ಕನ್ನಡ ಮತ್ತು ತುಳು ಯಕ್ಷಗಾನಗಳಲ್ಲಿ ಪೌರಾಣಿಕ ಮತ್ತು ಐತಿಹಾಸಿಕ ಪಾತ್ರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ ಕಲಾರಸಿಕರ ಮನ ಗೆದ್ದವರು. ಮಂಗಲ್ಪಾಡಿಯ ಯಕ್ಷಕಲಾ ಭಾರತಿ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಬಿಡುವಿನ ವೇಳೆ ಯಲ್ಲಿ ಕೃಷಿ ಕಾಯಕದಲ್ಲಿ ನಿರತರು.




ಬಿ. ಜಗಜ್ಜೀವನ್‌ದಾಸ್‌ ಶೆಟ್ಟಿ ಪ್ರಶಸ್ತಿ: ರಘುನಾಥ ಶೆಟ್ಟಿ ಬಾಯಾರು



ತೆಂಕುತಿಟ್ಟಿನ ಮುಖ್ಯ ವೇಷಧಾರಿಯಾಗಿ ಪುರುಷ ಮತ್ತು ಸ್ತ್ರೀಪಾತ್ರಗಳಲ್ಲಿ ಸಮಾನ ನಿರ್ವಹಣೆ ಮಾಡಿದವರು. ಕಾಸರಗೋಡಿನ ಬಾಯಾರಿನವರಾದ ರಘುನಾಥ ಶೆಟ್ಟರಿಗೆ ಯಕ್ಷಗಾನವು ತಂದೆ ಬಾಯಾರು ಐತಪ್ಪ ಶೆಟ್ಟಿ ಅವರಿಂದ ಬಂದ ಬಳುವಳಿ. ಪ್ರಸಿದ್ಧ ಸ್ತ್ರೀವೇಷಧಾರಿಯಾಗಿದ್ದ ತೀರ್ಥರೂಪರೇ ಇವರ ಯಕ್ಷಗಾನಕ್ಕೆ ಪ್ರೇರಣೆ ಮತ್ತು ಗುರು. 16ರ ಹರಯದಲ್ಲಿ ಯಕ್ಷ ತಿರುಗಾಟ ಆರಂಭಿಸಿ 37 ವರ್ಷ ಕರ್ನಾಟಕ ಮೇಳದಲ್ಲಿ, 8 ವರ್ಷ ಸುಂಕದಕಟ್ಟೆ ಮೇಳದಲ್ಲಿ ಕಲಾಸೇವೆಗೈದು ಈಗ ಕಟೀಲು ಮೇಳದ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಳೆಗಾಲದಲ್ಲಿ ಯಕ್ಷಗಾನ ವೇಷಭೂಷಣ ತಯಾರಿ ಮಾಡುವುದು ಉಪವೃತ್ತಿ.




ಕುತ್ಪಾಡಿ ಆನಂದ ಗಾಣಿಗ ಪ್ರಶಸ್ತಿ: ಮಳಲಿ ಶೀನಯ್ಯ



ಬಡಗುತಿಟ್ಟಿನ ಹಿರಿಯ ವೇಷಧಾರಿ, ಶಿವಮೊಗ್ಗ ಜಿಲ್ಲೆಯ ಹೊಸ ನಗರ ತಾಲೂಕಿನ ಮಳಲಿ ಇವರ ಹುಟ್ಟೂರು. 83ರ ಇಳಿ ಹರೆಯದಲ್ಲೂ ಕೃಷಿ ಕಾರ್ಯದಲ್ಲಿ ತೊಡಗಿಸಿ ಕೊಂಡಿರುವ ಜೀವನೋತ್ಸಾಹಿ. ಮಟಪಾಡಿ ವೀರಭದ್ರ ನಾಯಕರು ಇವರಿಗೆ ಯಕ್ಷಗಾನ ಗುರು. ಕಂಚಿಕಾರ್‌ ಭಾರತಿ ಪರಮೇಶ್ವರಯ್ಯನವರ ಪ್ರೋತ್ಸಾಹ ಈ ರಂಗಕ್ಕೆ ಬರಲು ಕಾರಣವಾಯಿತು. 20ನೇ ವರ್ಷಕ್ಕೆ ಯಕ್ಷಗಾನ ತಿರುಗಾಟ ಆರಂಭಿಸಿದ ಇವರು ಐದು ದಶಕಗಳ ಕಾಲ ಕಲಾವಿದರಾಗಿ ದುಡಿದವರು. ಮಳಲಿ ರಂಜದಕಟ್ಟೆ, ಹುಂಚ, ಹನ್ನೂರು, ಕೊಲ್ಲೂರು, ಸುಬ್ರಹ್ಮಣ್ಯ, ಇಡಗುಂಜಿ ಮೇಳಗಳಲ್ಲಿ ಕಲಾಸೇವೆಗೈದಿದ್ದಾರೆ. ಸತ್ಯ ಹರಿಶ್ಚಂದ್ರದ ವೀರಬಾಹು ಇವರಿಗೆ ವಿಶೇಷ ಕೀರ್ತಿಯನ್ನು ತಂದಿದೆ.




ದೊಡ್ಡ ಸಾಮಗ ಪ್ರಶಸ್ತಿ: ಬಲಿಪ ನಾರಾಯಣ ಭಾಗವತ



ಯಕ್ಷಗಾನ ಭಾಗವತಿಕೆ ನಾರಾಯಣ ಭಾಗವತರಿಗೆ ವಂಶಪಾರಂಪರ್ಯವಾಗಿ ಬಂದ ಬಳುವಳಿ. ಅಜ್ಜ ದೊಡ್ಡ ಬಲಿಪರು ಯಕ್ಷಗಾನದ ದಂತಕತೆ. ಅದೇ ಶೈಲಿಯ ಭಾಗವತಿಕೆಯಿಂದ ಇವರು ತೆಂಕುತಿಟ್ಟಿನ ಅಗ್ರಮಾನ್ಯ ಭಾಗವತರಾಗಿ ಪ್ರಸಿದ್ಧರು. ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮದಲ್ಲಿ ಜನನ. ಅಜ್ಜ ಮತ್ತು ತಂದೆಯವರಲ್ಲೆ ಭಾಗವತಿಕೆಯ ಅಭ್ಯಾಸ. ಕೂಡ್ಲು, ಕುಂಡಾವು, ಮೂಲ್ಕಿ, ರೆಂಜಾಳ ಮೇಳಗಳಲ್ಲಿ 15 ವರ್ಷ ತಿರುಗಾಟ ಮಾಡಿ ಅನಂತರ 33 ವರ್ಷ ಕಟೀಲು ಮೇಳದಲ್ಲಿ ಕಲಾ ಸೇವೆ ಮಾಡಿದ್ದಾರೆ. 75ರ ಇಳಿಹರೆಯದಲ್ಲೂ ಬಹು ಬೇಡಿಕೆಯ ಭಾಗವತ ರಾಗಿ ಆಟ-ಕೂಟಗಳಲ್ಲಿ ಭಾಗವಹಿಸುತ್ತಾರೆ. ಅಜ್ಜನಂತೆಯೇ ಪ್ರಸಂಗಕರ್ತರೂ ಹೌದು. 50ಕ್ಕೂ ಹೆಚ್ಚು ಆಡಿಯೋ- ವೀಡಿಯೋಗಳಲ್ಲಿ ಇವರ ಹಾಡುಗಾರಿಕೆ ದಾಖಲಿಸ ಲ್ಪಟ್ಟಿದೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.




ಭಾಗವತ ನಾರ್ಣಪ್ಪ ಉಪ್ಪೂರ ಪ್ರಶಸ್ತಿ: ಜಿ. ಸದಾನಂದ ಐತಾಳ



ಗುಂಡ್ಮಿ ಸದಾನಂದ ಐತಾಳರು ಬಡಗುತಿಟ್ಟಿನ ವೇಷಧಾರಿ, ಭಾಗವತ, ನಿರ್ದೇಶಕ, ವಿದ್ವಾಂಸ. ಸಾಲಿಗ್ರಾಮ ಸಮೀಪದ ಗುಂಡ್ಮಿಯವರು, ಈಗ ಉಡುಪಿಯ ನಿವಾಸಿ. ನಾರ್ಣಪ್ಪ ಉಪ್ಪೂರರು ಇವರಿಗೆ ಯಕ್ಷಗಾನ ಭಾಗವತಿಕೆಗೆ ಗುರು. ಬೇಳಂಜೆ ತಿಮ್ಮಪ್ಪನಾಯ್ಕ, ಸಕ್ಕಟ್ಟು ಸೀತಾರಾಮಯ್ಯ, ಮಟಪಾಡಿ ವೀರಭದ್ರ ನಾಯಕ್‌ -ಹೀಗೆ ಅವರ ಗುರು ಪರಂಪರೆ ದೊಡ್ಡದು. ಅಮೃತೇಶ್ವರಿ, ಮಾರಣಕಟ್ಟೆ, ಮಂದಾರ್ತಿ ಮೇಳಗಳಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದ್ದಾರೆ. ಹವ್ಯಾಸಿ ವೇಷಧಾರಿ ಯಾಗಿ ವೈವಿಧ್ಯಮಯ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಹತ್ತಾರು ಯಕ್ಷಗಾನ ಸಂಘಗಳಲ್ಲಿ ಭಾಗವತರಾಗಿ, ನಿರ್ದೇಶಕರಾಗಿ ಮಹತ್ವದ ಪಾತ್ರ ವಹಿಸಿದ್ದಾರೆ.

ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ, ಉಡುಪಿ ಯಕ್ಷಶಿಕ್ಷಣ ಟ್ರಸ್ಟ್‌ನಲ್ಲಿ ಗುರುಗಳಾಗಿ ತರಬೇತಿ ನೀಡುತ್ತಿ ದ್ದಾರೆ.. ಛಂದಸ್ಸಿನ ಕುರಿತು ಇವರಿಗೆ ವಿಶೇಷಾಸಕ್ತಿ. ಹಲವಾರು ವಿಚಾರ ಸಂಕಿರಣ, ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ..




ದಶಾವತಾರಿ ಮಾರ್ವಿ ರಾಮಕೃಷ್ಣ ಹೆಬ್ಟಾರ-ಭಾಗವತ ವಾದಿರಾಜ ಹೆಬ್ಟಾರ ಪ್ರಶಸ್ತಿ : ತೇಜ ಆಲೂರು



ಬಡಗುತಿಟ್ಟು ಪರಂಪರೆಯ ಮುಖ್ಯ ವೇಷಧಾರಿ. ಕುಂದಾಪುರ ತಾಲೂಕಿನ ಆಲೂರಿನವರು. ವೀರಭದ್ರ ನಾಯಕರು ಇವರಿಗೆ ಯಕ್ಷಗಾನ ಗುರು. ಮಂದಾರ್ತಿ, ಕೊಲ್ಲೂರು, ಸುರತ್ಕಲ್‌, ಕಮಲಶಿಲೆ, ಮಾರಣಕಟ್ಟೆ, ಇಡಗುಂಜಿ, ಪೆರ್ಡೂರು ಮೇಳಗಳಲ್ಲಿ ನಾಲ್ಕು ದಶಕಗಳ ಕಲಾಸೇವೆ ಗೈದಿದ್ದಾರೆ. ವಿಭಿನ್ನ ಪುರುಷ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಬಲ್ಲ ಆಲೂರು ತೇಜರು ಮುಂಡಾಸು ವೇಷ ಗಳಲ್ಲಿ ಪ್ರಸಿದ್ಧಿ ಪಡೆದವರು. ಬಿಡುವಿನ ವೇಳೆಯಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡವರು.




ಶಿರಿಯಾರ ಮಂಜು ನಾಯ್ಕ ಪ್ರಶಸ್ತಿ: ಕೃಷ್ಣಯಾಜಿ ಬಳ್ಕೂರು



ಬಡಗುತಿಟ್ಟಿನ ಮೇರು ನಟ ಕೆರೆಮನೆ ಮಹಾಬಲ ಹೆಗಡೆಯವರ ಸಮರ್ಥ ಉತ್ತರಾಧಿಕಾರಿ. ಆಳಂಗ, ಮಾತುಗಾರಿಕೆ, ಕುಣಿತ, ಅಭಿನಯ, ವೇಷಭೂಷಣ ಹೀಗೆ ಎಲ್ಲ ದೃಷ್ಟಿಯಿಂದ ಪರಿಪೂರ್ಣ ಕಲಾವಿದ. ಹೊನ್ನಾವರ ತಾಲೂಕಿನ ಬಳ್ಕೂರು ಇವರ ಹುಟ್ಟೂರು. 60ರ ಅಂಚಿನಲ್ಲಿರುವ ಯಾಜಿಯವರು 18ರ ಹರಯದಲ್ಲಿ ಯಕ್ಷಗಾನವನ್ನು ವೃತ್ತಿಯಾಗಿ ಸ್ವೀಕರಿಸಿದವರು. ಚಿಕ್ಕಪ್ಪ ರಾಮಚಂದ್ರ ಯಾಜಿಯವರೇ ಇವರಿಗೆ ಆರಂಭದ ಗುರು. ಆಮೇಲೆ ಕೆರೆಮನೆ ಮಹಾಬಲ ಹೆಗಡೆಯವರ ಗರಡಿಯಲ್ಲಿ ಪಳಗಿದವರು. ಇಡಗುಂಜಿ, ಅಮೃತೇಶ್ವರಿ, ಕಮಲಶಿಲೆ, ಪಂಚಲಿಂಗ ಮೇಳಗಳಲ್ಲಿ ಸುಮಾರು 10 ವರ್ಷ ತಿರುಗಾಟ ಮಾಡಿ ಮುಂದೆ 3 ದಶಕ ಸಾಲಿಗ್ರಾಮ ಮೇಳದ ಪ್ರಧಾನ ವೇಷಧಾರಿಯಾಗಿ ವಿಜೃಂಭಿಸಿದವರು. ಅವರೇ ಸ್ಥಾಪಿಸಿದ ಯಾಜಿ ಯಕ್ಷ ಮಿತ್ರಮಂಡಳಿಗೀಗ ದಶಕದ ಸಂಭ್ರಮ. ಪೌರಾಣಿಕ ಪಾತ್ರಗಳನ್ನು ಸುಂದರ ವಾಗಿ ಕಡೆದು ನಿಲ್ಲಿಸಿದ ಪ್ರತಿಭಾಸಂಪನ್ನ ಕಲಾವಿದ.




ಕೋಟ ವೈಕುಂಠ ಪ್ರಶಸ್ತಿ: ಮಹಾದೇವ ನಾಯ್ಕ ಅರಳಗೋಡು



ಬಡಗುತಿಟ್ಟಿನ ಸುಪ್ರಸಿದ್ಧ ವೇಷಧಾರಿ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅರಲಗೋಡು ಇವರ ಹುಟ್ಟೂರು. ಗುಂಡು ಸೀತಾರಾಮ ರಾವ್‌, ಗೋಡೆ ನಾರಾಯಣ ಹೆಗಡೆ, ಜಿ. ಮಹಾಬಲ ಗಿರಿಯಪ್ಪ, ಶುಂಠಿ ಶೇಷಗಿರಿಯಪ್ಪ ಇವರು ಮಹಾದೇವ ನಾಯ್ಕ ರಿಗೆ ಯಕ್ಷಗಾನ ಗುರುಗಳು. ಕಂಚಿಕೈ, ತೀರ್ಥಹಳ್ಳಿ, ರಂಜದಕಟ್ಟೆ, ಶೃಂಗೇರಿ, ಸಾಲಿಗ್ರಾಮ, ಹಿರಿಯಡ್ಕ, ಬೇಡ್ಕಣಿ, ಮಡಾಮಕ್ಕಿ, ಮೂಲ್ಕಿ, ಅಮೃತೇಶ್ವರಿ, ಸಿಗಂದೂರು, ಬಚ್ಚಗಾರು, ಗೋಳಿಗರಡಿ ಮೇಳಗಳಲ್ಲಿ ನಾಲ್ಕು ದಶಕಗಳ ಕಲಾಸೇವೆ ಮಾಡಿದ್ದಾರೆ. ವೇಷಭೂಷಣಗಳ ತಯಾರಿಯಲ್ಲೂ ಪರಿಣತರು. ಕೃಷಿಕಾಯಕದಲ್ಲಿ ನಿರತರು.




ಪಡಾರು ನರಸಿಂಹ ಶಾಸ್ತ್ರಿ ಪ್ರಶಸ್ತಿ: ದೇವಕಾನ ಕೃಷ್ಣ ಭಟ್‌



ತೆಂಕುತಿಟ್ಟು ಯಕ್ಷಗಾನದ ಕಲಾತ್ಮಕ ಆಹಾರ್ಯ ತಯಾರಿ ಮತ್ತು ಒದಗಣೆ ಯಲ್ಲಿ ಪ್ರಮುಖರು. ಕಾಸರ ಗೋಡು ಜಿಲ್ಲೆಯ ಪೈವಳಿಕೆ ಯವರಾದ ಇವರು ಅಧ್ಯಾಪಕ ರಾಗಿದ್ದವರು. ಕುಡಾಣ ಗೋಪಾಲಕೃಷ್ಣ ಭಟ್ಟರಲ್ಲಿ ಯಕ್ಷಗಾನ ತರಬೇತಿ ಪಡೆದು ಹವ್ಯಾಸಿ ಕಲಾವಿದರಾಗಿ ತೊಡಗಿಸಿಕೊಂಡವರು. ತೆಂಕು ತಿಟ್ಟಿನ ಹವ್ಯಾಸಿ ಪ್ರದರ್ಶನ ಮತ್ತು ಸಂಘದ ಆಟಗಳಿಗೆ ಯಕ್ಷಗಾನ ವೇಷಭೂಷಣ ಒದಗಿಸುವ ಕಾರ್ಯವನ್ನು "ಗಣೇಶ ಕಲಾವೃಂದ' ಹೆಸರಿನಲ್ಲಿ ಮಾಡಿಕೊಂಡು ಬಂದಿ ದ್ದಾರೆ. ವೇಷಭೂಷಣದ ವರ್ಣ ಸಂಯೋಜನೆಯ ಬಗ್ಗೆ, ಬಣ್ಣಗಾರಿಕೆಯ ಬಗ್ಗೆ ನಿಖರವಾಗಿ ಹೇಳಬಲ್ಲ ತಜ್ಞರು. "ಬೆನಕ ಯಕ್ಷಕಲಾ ವೇದಿಕೆ'ಯ ಮೂಲಕ ಯಕ್ಷಗಾನ ಸಂಬಂಧಿ ಕಮ್ಮಟ ಕಾರ್ಯಾಗಾರ, ಸಾಧಕ ಕಲಾವಿದರಿಗೆ ಸಮ್ಮಾನ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದಾರೆ.




ಕಡಿಯಾಳಿ ಸುಬ್ರಾಯ ಉಪಾಧ್ಯಾಯ ಪ್ರಶಸ್ತಿ: ಮಾಂಬಾಡಿ ಸುಬ್ರಹ್ಮಣ್ಯ ಭಟ್‌



ತೆಂಕುತಿಟ್ಟಿನ ಅಗ್ರಮಾನ್ಯ ಹಿಮ್ಮೇಳವಾದಕರು ಮತ್ತು ಗುರುಗಳು. ಇವರಿಗೆ ಯಕ್ಷಗಾನ ವಂಶ ಪಾರಂಪರ್ಯ ವಾಗಿ ಬಂದ ಬಳುವಳಿ. ತಂದೆ ಮಾಂಬಾಡಿ ನಾರಾಯಣ ಭಾಗವತರು ಬಹು ಪ್ರಸಿದ್ಧಿ ಪಡೆದವರು. 65ರ ಹರೆಯದ ಸುಬ್ರಹ್ಮಣ್ಯ ಭಟ್ಟರಿಗೆ ಅವರ ತಂದೆಯವರೇ ಆರಂಭದ ಗುರುಗಳು. ಮುಂದೆ ಕುದ್ರೆಕೊಡ್ಲು ರಾಮಭಟ್‌, ಕಾಂಚನ ರಾಮ ಭಟ್‌, ನಿಡ್ಲೆ ನರಸಿಂಹ ಭಟ್‌ ಇವರಿಂದ ಚೆಂಡೆಮದ್ದಳೆ ವಾದನದಲ್ಲಿ ವಿಶೇಷ ಪರಿಣತಿ ಪಡೆದರು. ಕಟೀಲು, ಮೂಲ್ಕಿ, ಕೂಡ್ಲು, ಧರ್ಮಸ್ಥಳ, ಕದ್ರಿ ಮೇಳಗಳಲ್ಲಿ ಸುಮಾರು ಮೂರು ದಶಕ ತಿರುಗಾಟ ನಡೆಸಿರುತ್ತಾರೆ. ಗುರುಗಳಾಗಿ ಸುಮಾರು 50 ಕಡೆ ಯಕ್ಷಗಾನ ತರಬೇತಿ ನೀಡುತ್ತ ಬಂದಿ ದ್ದಾರೆ. ಯಕ್ಷಗಾನ ಪಾಠ ಹೇಳುವ ಕಲೆ ಅವರಿಗೆ ಕರಗತ.




ಕೋಳ್ಯೂರು ರಾಮಚಂದ್ರ ರಾವ್‌ ಪ್ರಶಸ್ತಿ: ಸಂಜೀವ ಬಳೆಗಾರ



ಉಭಯ ತಿಟ್ಟುಗಳಲ್ಲಿ ಪಾತ್ರಗಳನ್ನು ನಿರ್ವಹಿಸಿದ ಪ್ರಸಿದ್ಧ ಸ್ತ್ರೀವೇಷಧಾರಿ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶಂಕರನಾರಾಯಣ ಇವರ ಹುಟ್ಟೂರು. ಸಹೋದರ ಗೋಪಾಲಕೃಷ್ಣರಿಂದ ಯಕ್ಷಗಾನ ನಾಟ್ಯಾಭ್ಯಾಸವನ್ನು ಮಾಡಿ 18ರ ಹರೆಯ ದಲ್ಲಿ ರಂಗ ಪ್ರವೇಶಿಸಿದರು. ಕೊಲ್ಲೂರು, ಇಡಗುಂಜಿ, ಅಮೃತೇಶ್ವರಿ, ಸುರತ್ಕಲ್‌ ಮೇಳಗಳಲ್ಲಿ ಐದು ವರ್ಷ ತಿರುಗಾಟ ಮಾಡಿ ಕಳೆದ ನಾಲ್ಕು ದಶಕಗಳಿಂದ ಕಟೀಲು ಮೇಳದಲ್ಲಿ ಪ್ರಧಾನ ಸ್ತ್ರೀವೇಷಧಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಟೀಲು ಕ್ಷೇತ್ರ ಮಹಾತ್ಮೆಯ "ಯಶೋಮತಿ' ಪಾತ್ರ ನಿರ್ವಹಣೆಯ ಸಿದ್ಧಿ ಇವರಿಗೆ "ಯಶೋಮತಿ ಬಳೆಗಾರ' ಎಂಬ ಬಿರುದನ್ನು ನೀಡಿದೆ. ಮಳೆಗಾಲದಲ್ಲಿ ಆಸಕ್ತರಿಗೆ ಯಕ್ಷಗಾನ ತರಬೇತಿ ನೀಡುವುದನ್ನು ನಿರಂತರ ನಡೆಸಿಕೊಂಡು ಬಂದವರು.




ಐರೋಡಿ ರಾಮ ಗಾಣಿಗ ಪ್ರಶಸ್ತಿ : ಸದಾನಂದ ಪ್ರಭು



ಬಡಗುತಿಟ್ಟಿನ ಹಿರಿಯ ಹಿಮ್ಮೇಳ ವಾದಕರು. 80ರ ಅಂಚಿನಲ್ಲಿರುವ ಸದಾನಂದ ಪ್ರಭುಗಳು ಉಡುಪಿ ಜಿಲ್ಲೆ ಕುಂದಾಪುರ ಸಮೀಪದ ಯಳಜಿತಿನವರು. ಆರಂಭ ದಲ್ಲಿ ದೊಡ್ಡಪ್ಪ ದಾಸಪ್ಪಪ್ರಭುಗಳಲ್ಲಿ ಯಕ್ಷಗಾನ ಅಭ್ಯಾಸ ಮಾಡಿ ಮುಂದೆ ಬೇಳಂಜೆ ತಿಮ್ಮಪ್ಪ ನಾಯ್ಕರಲ್ಲಿ ಚೆಂಡೆ ಮದ್ದಳೆವಾದನ ತರಬೇತಿ ಪಡೆದರು. ಕೊಲ್ಲೂರು ಮಾರಣಕಟ್ಟೆ, ಅಮೃತೇಶ್ವರಿ , ಕಮಲಶಿಲೆ, ಬಗ್ವಾಡಿ, ಗೋಳಿಗರಡಿ, ಕಳವಾಡಿ, ನಾಗರಕೋಡಿಗೆ ಮೇಳಗಳಲ್ಲಿ 25 ವರುಷ ಕಲಾಸೇವೆ ನಡೆಸಿದ್ದಾರೆ. ಉಪ್ಪಿನಕುದ್ರು ಗಣೇಶ ಯಕ್ಷಗಾನ ಗೊಂಬೆಯಾಟ ಮೇಳ ಹಾಗೂ ಅನೇಕ ತಾಳಮದ್ದಲೆ ಮತ್ತು ಯಕ್ಷಗಾನ ಸಂಘ ಗಳಿಗೆ ಹಿಮ್ಮೇಳವಾದಕರಾಗಿ ಸಹಕರಿಸುತ್ತ ಬಂದಿದ್ದಾರೆ.




ಶ್ರೀಮತಿ ಪ್ರಭಾವತಿ ವಿ. ಶೆಣೈ-ಯು ವಿಶ್ವನಾಥ ಶೆಣೈ ಪ್ರಶಸ್ತಿ : ರಾಮ ಹೆಗಡೆ ಚಿಟ್ಟಾಣಿ



ಬಡಗು ತಿಟ್ಟಿನ ಸ್ತ್ರೀಪಾತ್ರ ಮತ್ತು ಪುರುಷ ವೇಷಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ ಹಿರಿಯ ಕಲಾವಿದರು. ಹೊನ್ನಾವರ ತಾಲೂಕಿನ ಚಿಟ್ಟಾಣಿಯಲ್ಲಿ ಜನನ. ಬಾಳೆಗದ್ದೆ ರಾಮಕೃಷ್ಣ ಭಟ್ಟರು ಇವರ ಯಕ್ಷಗಾನ ಗುರು. 15ನೇ ವಯಸ್ಸಿಗೆ ರಂಗ ಪ್ರವೇಶಿಸಿದ ಇವರದು ಐದು ದಶಕಗಳ ಕಲಾ ಸೇವೆ. ಬಹುಪಾಲು ಗುಂಡುಬಾಳ ಮುಖ್ಯಪ್ರಾಣನ ಸನ್ನಿಧಿ ಯಲ್ಲಿ ಪಾತ್ರ ನಿರ್ವಹಿಸಿದ ಇವರು ರಾಜರಾಜೇ ಶ್ವರಿ, ಭರತನಹಳ್ಳಿ, ಸಾಲಿಗ್ರಾಮ ಮೇಳಗಳಲ್ಲಿ ತಿರುಗಾಟ ನಡೆಸಿದ್ದಾರೆ. ಆರಂಭದಲ್ಲಿ ಸ್ತ್ರೀಪಾತ್ರ ಬಳಿಕ ಪುರುಷ ಪಾತ್ರಗಳನ್ನು ಮಾಡಿ ಕಲಾರಸಿಕರ ಪ್ರೀತಿಗೆ ಪಾತ್ರರಾದ ವರು. ಬಿಡುವಿನ ವೇಳೆಯಲ್ಲಿ ಕೃಷಿಕ.



ಕೃಪೆ : http://www.udayavani.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ